ದುಡಿಮೆ, ಆದಿಮ

ಆರ್ಥಿಕ ಬೆಳವಣಿಗೆಯ ಮೊದಲ ಹಂತಗಳಲ್ಲಿ ಮಾನವರು ತಮ್ಮ ಬಯಕೆಗಳ ಪೂರೈಕೆಗಾಗಿ ಮಾಡುತ್ತಿದ್ದ ದುಡಿಮೆ ಅಥವಾ ಶ್ರಮ. ಆರ್ಥಿಕ ಚಟುವಟಿಕೆಯ ವಿಧಾನ, ಶ್ರಮ ವಿಭಜನೆಯ ವ್ಯವಸ್ಥೆ ಮುಂತಾದವು ಈಗಿನವಕ್ಕಿಂತ ಆಗ ತುಂಬ ಭಿನ್ನವಾಗಿದ್ದವು. ಇಂದಿನಂತೆ ಅಂದೂ ಶ್ರಮ ವಿಭಜನೆ ಇತ್ತಾದರೂ ಅದು ಜಟಿಲವಾಗಿರದೆ ಬಹಳ ಸರಳವಾಗಿ ಸ್ಥೂಲರೂಪದಲ್ಲಿತ್ತು.  ಪುರುಷರ ಕಾರ್ಯ ಬೇಟೆಯಾಡುವುದಾದರೆ ಸ್ತ್ರೀಯರು ಅಡಿಗೆಯ ಕೆಲಸದಲ್ಲಿ ನಿರತರಾಗಿರುತ್ತಿದ್ದರು. ವೃದ್ಧರು ಬೇಟೆಯಾಡಲು ಬೇಕಾದ ಉಪಕರಣಗಳನ್ನು ತಯಾರಿಸಿಕೊಡುತ್ತಿದ್ದರು. ಆದಿಮ ಜನರಲ್ಲಿ ಪರಿವಾರ ಬೇಟೆಯನ್ನು ಅರಸಿಕೊಂಡು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಓಡಾಡುತ್ತಿತ್ತೇ ಹೊರತು ಒಂದು ಕಡೆ ನೆಲಸಿ ಜೀವನ ನಡೆಸುತ್ತಿರಲಿಲ್ಲ. ಜೊತೆಗೆ ಬೇಟೆ ಸಿಕ್ಕಿದಾಗ ಔತಣ, ಇಲ್ಲದಾಗ ಉಪವಾಸ. ಕಾಡುತ್ತಿದ್ದ ಹಸಿವಿನ ಸಮಸ್ಯೆಯ ಪರಿಹಾರಕ್ಕಾಗಿ ಈ ಜನರು ಕಾಲಕ್ರಮದಲ್ಲಿ ಪಶುಪಾಲನೆಯನ್ನೂ ವ್ಯವಸಾಯವನ್ನೂ ಕಲಿತುಕೊಂಡರು. ಸ್ತ್ರೀಪುರುಷರಲ್ಲಿಯ ಶ್ರಮವಿಭಜನೆಯ ವ್ಯವಸ್ಥೆ ಮುಂದುವರಿಯಿತು. ಪುರುಷರು ಕಷ್ಟವಾದ ಮತ್ತು ಅಪಾಯಕರವಾದ ಕೆಲಸಗಳನ್ನು ವಹಿಸಿಕೊಂಡು ಸ್ತ್ರೀಯರಿಗೆ ಸರಳವಾದ ಮತ್ತು ತಾಳ್ಮೆ ಅಗತ್ಯವಾದ ಕೆಲಸಗಳನ್ನು ಬಿಟ್ಟು ಕೊಟ್ಟರು.

ಆದಿಮ ಕಾಲದ ಆರ್ಥಿಕತೆಯ ಕೆಲವು ಲಕ್ಷಣಗಳು ಇವು : ಒಂದನೆಯದಾಗಿ, ಸಂಪೂರ್ಣ ಶ್ರಮ ವಿಭಜನೆ ಇರದಿದ್ದುದರಿಂದ ಪ್ರತಿ ಪಂಗಡ ಇಲ್ಲವೇ ಕುಟುಂಬ ಸ್ವಾವಲಂಭಿಯಾಗಿತ್ತು. ಆದ್ದರಿಂದ ಸರಕುಗಳ ವಿನಿಮಯದ ಅವಶ್ಯಕತೆ ಹೆಚ್ಚಾಗಿ ಇರಲಿಲ್ಲ. ಅಲ್ಲದೆ ಕುಟುಂಬದ ಸದಸ್ಯರೇ ದುಡಿಮೆ ಮಾಡಿ ಕೆಲಸ ಮುಗಿಸುತ್ತಿದ್ದದರಿಂದ ಕಾರ್ಮಿಕರ ಪ್ರತ್ಯೇಕ ವರ್ಗ ಅಸ್ತಿತ್ವಕ್ಕೆ ಬರಲೂ ಅವಕಾಶವಿರಲಿಲ್ಲ. ಸಣ್ಣ ಸಣ್ಣ ಕೈಗಾರಿಕೋದ್ಯಮಗಳು ಅಸ್ತ್ವಿತ್ವಕ್ಕೆ ಬಂದ ಮೇಲೂ ಉದ್ಯಮಿಯೇ ಸ್ವತಃ ದುಡಿಮೆ ಮಾಡುತ್ತಿದ್ದನೇ ಹೊರತು ಅವನು ಸಾಮಾನ್ಯವಾಗಿ ಕಾರ್ಮಿಕರನ್ನು ನೇಮಿಸಿಕೊಳ್ಳುತ್ತಿರಲಿಲ್ಲ.  ಅದರ ಅವಶ್ಯಕತೆಯೂ ಹೆಚ್ಚಾಗಿ ಇರಲಿಲ್ಲ. ತನ್ನ ಸಹಾಯಕ್ಕಾಗಿ ಕುಟುಂಬದ ಸದಸ್ಯರ ಜೊತೆಗೆ ಹೊರಗಿನ ಕೆಲವು ಯುವಕರಿಗೆ ತರಭೇತು ನೀಡುವ ಉದ್ದೇಶದಿಂದ ಅವರನ್ನು ಅಭ್ಯಾಸಿಗಳನ್ನಾಗಿ ತೆಗೆದುಕೊಳ್ಳುತ್ತಿದ್ದ. ಸಾಕಷ್ಟು ತರಭೇತು ಪಡೆದ ಅನಂತರ ಅಭ್ಯಾಸಿಗೆ ತಾನೇ ಉದ್ಯಮವನ್ನು ಸ್ಥಾಪಿಸಿಕೊಳ್ಳಲು ಅವಕಾಶವಿತ್ತು. ಯಜಮಾನನ ಸೇವೆ ಮಾಡಿಕೊಂಡಿರಬೇಕೆಂಬ ಕಡ್ಡಾಯವೇನೂ ಇರಲಿಲ್ಲ. ಕಾರ್ಮಿಕ ಧಣಿ, ಎಂಬ ಸಾಮಾಜಿಕ ವರ್ಗಗಳು ಇರಲಿಲ್ಲ. ಎರಡನೆಯದಾಗಿ, ಶ್ರಮಜೀವನ ಸಾಮಾನ್ಯವಾಗಿತ್ತು. ಹೆಚ್ಚು ಯಂತ್ರೋಪಕರಣಗಳು ಇಲ್ಲದಿದ್ದುದು ಇದಕ್ಕೆ ಕಾರಣ. ಆದರೂ ದುಡಿಮೆಯ ಘನತೆ ತಿಳಿದಿರಲಿಲ್ಲ. ಕೆಲವು ಕೆಲಸಗಳು ಕೀಳೆಂಬ ತಪ್ಪು ಭಾವನೆ ಬಂದಿತ್ತು. ಕೀಳೆಂದು ಭಾವಿಸಲಾದ ಕೆಲಸಗಳನ್ನು ಗುಲಾಮರು ಅಥವಾ ಕೆಳದರ್ಜೆಯವರೆಂದು ಪರಿಗಣಿತರಾದವರಿಂದ ಮಾಡಿಸಲಾಗುತ್ತಿತ್ತು.

ಆದರೆ ಸಾಮಾನ್ಯವಾಗಿ ಭಾವಿಸಲಾಗಿರುವಂತೆ ಹಲವೇಳೇ ಇವರಿಗೆ ಪೂರ್ಣೋದ್ಯೋಗಿ ಇಲ್ಲದಿದ್ದರೂ ಇವರ ಸೋಮಾರಿಯಾಗುತ್ತಿರಲಿಲ್ಲ. ಅತಿ ಕಷ್ಟದ ಮತ್ತು ಬೇಸರದ ಕೆಲಸಗಳನ್ನೂ ಶ್ರದ್ದೆಯಿಂದ ಮಾಡುವ ಆಸಕ್ತಿ ಇವರಲ್ಲಿದ್ದವು. ಇದಕ್ಕೆ ಹಲವು ಪ್ರೇರಣೆಗಳು ಸಹಾಯಕವಾಗಿದ್ದವು. ಇವುಗಳಲ್ಲಿ ಮುಖ್ಯವಾದ್ದು, ಕೆಲಸಕ್ಕೂ ಕೆಲಸಗಾರರಿಗೂ ಇದ್ದ ನಿಕಟ ಸಂಬಂಧ. ಯಂತ್ರಗಳ ಸಹಾಯವಿಲ್ಲದೆ ತಾವು ತಯಾರಿಸಿದ ವಸ್ತು ತಮ್ಮದೇ ಉತ್ಪನ್ನವೆಂಬ ತೃಪ್ತಿ ಅವರಿಗೆ  ಇರುತ್ತಿತ್ತು; ತನ್ನ ಉತ್ಪನ್ನದ ವಿಷಯದಲ್ಲಿ  ಹೆಮ್ಮೆ ಇರುತ್ತಿತ್ತು. ಕೆಲಸ ಅವರಿಗೆ ಆನಂದ ನೀಡುತ್ತಿತ್ತು. ನಂಟುತನ, ಕುಟುಂಬ ಇಲ್ಲವೆ ಪಂಗಡದ ಮುಖ್ಯಸ್ಥನ ಅಧಿಕಾರ, ಮತಾಚರಣೆಯ ನಿಷ್ಠೆ- ಈ ಕಾರಣಗಳಿಂದಾಗಿ ಅವರು ಯಾವುದೇ ಕೆಲಸವನ್ನು ಬಹಳ ಶ್ರದ್ದೆಯಿಂದ ಮಾಡುತ್ತಿದ್ದರು. ತಮ್ಮ ಕೆಲಸದಲ್ಲಿ ಅವರಿಗೆ ಎಷ್ಟು ಆಸಕ್ತಿ ಇರುತ್ತಿತ್ತೆಂದರೆ ಅವನು ಬಳಸುತ್ತಿದ್ದ ಸಣ್ಣ ಪುಟ್ಟ ಉಪಕರಣಗಳು ಎಷ್ಟೇ ಒರಟಾಗಿದ್ದರೂ ಅವರು ಜೋಪಾನವಾಗಿಟ್ಟುಕೊಳ್ಳತ್ತಿದ್ದರಲ್ಲದೆ ಅವುಗಳಲ್ಲಿ ಅವರಿಗೆ ಪೂಜ್ಯಭಾವನೆ ಇರುತ್ತಿತ್ತು. ಸಾಮೂಹಿಕ ದುಡಿಮೆಯಲ್ಲಿ ಹುಮ್ಮಸ್ಸು ಇರುತ್ತಿತ್ತು.  ಕಾಲಹರಣ ಮಾಡುತ್ತಿರಲಿಲ್ಲ. ಅವರ ಮೇಲೆ ಯಾವ ರೀತಿಯ ಉಸ್ತುವಾರಿ ಹಾಕುವುದೂ ಅನೇಕ ವೇಳೆ ಅನಾವಶ್ಯಕವೆನಿಸುತ್ತಿತ್ತು, ಕೆಲಸ ಕಠಿಣ ಅಥವಾ ಬೇಸರದ್ದಾಗಿದ್ದ ಪಕ್ಷದಲ್ಲಿ ಅದನ್ನು ಮರೆಯುವ ಉದ್ದೇಶದಿಂದ ಕತೆಗಳನ್ನೂ ಸಾಮೂಹಿಕವಾಗಿ ಹಾಡುಗಳನ್ನೋ ಹೇಳಿಕೊಳ್ಳವುದೊಂದು ವಾಡಿಕೆಯಾಗಿತ್ತು.

ಅಪೂರ್ಣೋದ್ಯೋಗದಿಂದಾಗಿ ಸದಾ ದಾರಿದ್ರ್ಯ ಹಾಗೂ ಅಭದ್ರತೆಗಳನ್ನನುಭವಿಸುತ್ತ ಆಧುನಿಕ ನಾಗರಿಕತೆಯಿಂದ ದೂರವಾದ ಇಂಥವರ ಗುಂಪುಗಳು ಈಗಲೂ ಆಫ್ರಿಕ ಮತ್ತು ಲ್ಯಾಟಿನ್ ಅಮೇರಿಕದಲ್ಲಿ ಇವೆ. ಭಾರತದ ಆದಿವಾಸಿ ಜನಗಳಲ್ಲಿ ಈ ಬಗೆಯ ಆರ್ಥಿಕತೆ ಉಂಟು. ಇವರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳನ್ನೂ ಮನೋಧರ್ಮಗಳನ್ನೂ ಚೆನ್ನಾಗಿ ಅಧ್ಯಯನ ಮಾಡಿ, ಉಚಿತವಾದ ಪ್ರೇರಣೆಗಳನ್ನು ಇವರ ಮುಂದಿಟ್ಟು, ನಾಡಿನ ಧ್ಯೇಯಗಳತ್ತ ಈ ಜನರ ಗಮನಸೆಳೆದು, ಇವರನ್ನೂ ರಾಷ್ಟ್ರಜೀವನದ ಪ್ರವಾಹದಲ್ಲಿ ಸೇರಿಸುವ ಪ್ರಯತ್ನ ನಡೆಯುತ್ತಿದೆ. 						  (ಎ.ಬಿ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ